ಕವನ ವಿ ವಸಿಷ್ಠ

III sem, Electronics and Electrical Engineering

ಮೈವೆತ್ತ ಸೈತಾನನನ್ನುರುಳಿಸಿ

ಮತ್ತೆ ಮತ್ತೆ ಆಗುತಿಹುದೆನ್ನ ಜನನ;
ತೇಲಿ ಮುಳುಗುತಿಹ ಶ್ರೀ ಹರಣ
ಓ, ಇದು ಜೀವನ್ಮುಕ್ತ ಪಯಣ!

ಹೃದಯದೊಳಿಲ್ಲ ದುಂದುಭಿ ಧ್ವಾನ
ಬರಿ ಪ್ರವಹಿಸುತಿದೆ ರಣಮೌನ;
ಚಾಂಚಲ್ಯಾವೃತೆ, ನಾ ಚಿತ್ತ ರಿಕ್ತೆ
ಸುಶಾಂತ ಪ್ರೀತೆ, ಋಜು ಅಸ್ಮಿತೆ….

ತೊಟ್ಟಿಕ್ಕುತಿದೆ ನೆತ್ತರ ಕೊನೆ ಹನಿ
ಅಂತವಾಗದು ಏಕೀ ರಕ್ತ ಚರಿತೆ?
ಮನರಣರಂಗದಿ ಹೆಣಗಳಾ ಓಜೆ
ಎಲ್ಲವೂ ನನ್ನದೇ, ಏಕಿಂಥಾ ಸಜೆ?

ಹೋಳಾಗಿದೆ ಅತಿ ಧವಲ ಚೇತನ
ಇತ್ತ ಸುಮನ, ಅತ್ತ ಸೈತಾನ;
ಪ್ರಾಂಜಲ ಸ್ಮಿತ ಚೆಲ್ಲಿ ನಲಿಸಲು ಮನ
ಬೆಂಕಿಯುಗುಳಿ ದಹಿಸುವ  ಸೈತಾನ…

ಅನಂತದಾಚಿನ ಅಮೃತ ಜೊನ್ನ
ಕೈ ಬೀಸುತ್ತಾ ಕರೆದಿದೆ ನನ್ನ;
ಕಾರಣವಿರದೇ ಬಂಧಿಯಾಗಿಹೆ
ಎಲ್ಲವೂ ಇದ್ದೂ ಶೂನ್ಯವಾಗಿಹೆ…

ನನಗೇ ನಾನೀಗ ಬಲು ನಿಗೂಢ
ನಿರುತ್ತರಳಾಗಿ ಮನ ದಿಗ್ಮೂಢ;
ಅರಿಯೇ, ಆದರೂ ಖಡ್ಗ ಹಿಡಿದು
ಹೋರಾಡುತಿಹೆ, ನಾ ಮರು ಜೀವಿತೆ…

ತನು ಬೆಂದರೂ ನಶಿಸನು ಆತ್ಮ
ಆಚಂದ್ರಾರ್ಕ ಅಂತವಾಗದೀ ಅನುವರ;
ಸೋಲೆನೆಂದಿಗೂ, ನಾ ಹರಿಪ್ರೀತೆ
ದಿವ್ಯ ಶಕ್ತೆ, ನಾ ಚಿತ್ತ ರಿಕ್ತೆ…
Advertisements